Wednesday, June 26, 2019

ಗೊಂದಲ


ಇವತ್ತು ರಾಮ್ ಟ್ರೈನು ೧೦ ನಿಮಿಷ ಲೇಟು ಅಂತ ಆನಂದನಿಗೆ ಠಣ್ ಠಣ್ ಎಂದು ತನ್ನ ಮೊಬೈಲಿಗೆ ರಭಸವಾಗಿ ಬರುತ್ತಿದ್ದ ವಾಟ್ಸಪ್ ಮೇಸೆಜುಗಳು ಹೇಳುತಿದ್ದವು. ರೈಲು ರಾಮನಗರದಿಂದ ಬರುವುದರಿಂದ ಅದರ ಹೆಸರು ರಾಮ್ ಎಂದು ಜನಜನಿತವಾಗಿದೆ. ಅದರ ಸಲುವಾಗಿ ಅದರಲ್ಲಿ ಓಡಾಡುವ ನೂರಾರು ಜನ ನೂರಾರು ವಾಟ್ಸಾಪ್ ಗ್ರೂಪುಗಳನ್ನ ಮಾಡಿಕೊಂಡಿದ್ದರು.  ರೈಲು ತಡವಾದರೆ, ಬೇಗ ಬಂದರೆ, ರೈಲ್ವೇ ಸಚಿವಾಲಯ ಅಪರೂಪಕ್ಕೆ ಕಳುಹಿಸಿದ್ದ ಟ್ವಿಟರ್ ಮೇಸೇಜುಗಳ ಬಗ್ಗೆ, ರೈಲು ತಡವಾಗಿದ್ದಕ್ಕೆ ಯಾರದರೂ ಟ್ವಿಟ್ಟರಿನಲ್ಲಿ ಪ್ರತಿಭಟಿಸಿದರ ಬಗ್ಗೆ ಹಾಗು ಅದನ್ನು ಮತ್ತಶ್ಟು ಜನರಿಗೆ ತಲುಪಿಸುವಂತೆ ಕೋರಿ ಮತ್ತು ಟೀಕೆಟು ಕಲೆಕ್ಟರು ಮೊದಲ ಬೋಗಿಗೆ ಬಂದ ಬಗ್ಗೆ ಹಾಗು ಎಷ್ಟು ಜನ ಕಲೆಕ್ಟರಿರುವ ಬಗ್ಗೆ ಹೀಗೆ ತರಹಾವೇರಿ ಮೇಸೆಜುಗಳು ಆ ಗುಂಪುಗಳಿಗೆ ಬಂದು ಬೀಳುತಿದ್ದವು. ಒಬ್ಬರು ಒಂದಕ್ಕಿಂತ ಹೆಚ್ಚು ಗುಂಪುಗಳಲ್ಲಿ ಇರುವ ಕಾರಣ ಮೆಸೇಜುಗಳು ಕಾಳ್ಗಿಚ್ಚಿನಂತೆ ಹರಡುತ್ತಿದ್ದವು.

ಆನಂದ ಬೆಳಗ್ಗೆ ಹೋರಡುವುದೇ ಲೇಟು. ಹಾಗಾಗಿ ವಾಟ್ಸಾಪಿನ ಮೇಸೆಜುಗಳನ್ನು ಬೆಳಗ್ಗೆ ಹಾಸಿಗೆಯ ಮೇಲಿಂದ ಏಳುವುದಕ್ಕೆ ಮೊದಲು ನೋಡುವುದನ್ನು ಬಿಟ್ಟರೆ ಮತ್ತೆ ನೋಡುವುದು ರೈಲಿನಲ್ಲೇ. ಅವನು ಏಳುವುದಕ್ಕೂ ಮತ್ತು ರೈಲು ಹತ್ತುವುದಕ್ಕೂ ಇರುವುದು ಕೇವಲ ೫೦ ನಿಮಿಶಗಳು. ಅಷ್ಟರಲ್ಲಿ ಅವನು ಅವನ ಟಚಿನಲ್ಲಿ ಇರುವ ಹುಡುಗಿಯರಿಗೆಲ್ಲಾ ಗುಡ್ ಮಾರ್ನಿಂಗ್ ಮೇಸೆಜ್‍ ಅನ್ನೋ ಅಥವಾ ಬೇರೆ ಯಾರದರು ಕಳಿಸಿದ ಚೆಂದದ ಫರ್ವರ್ಡ್ ಚಿತ್ರವನ್ನು ಕಳಿಸಿ, ಫೇಸ್ಭುಕ್ ಮತ್ತು ಹೊಸದಾಗಿ ಇನ್ಸ್ಟಾಲ್ ಮಾಡಿರುವ ಇನ್ಸ್ಟಾಗ್ರಮ್ ಮೇಲೆ ಕಣ್ಣಾಡಿಸಿ, ಬೆಳಗಿನ ಕರ್ಮಗಳನ್ನು ಮುಗಿಸಿ ಪಿ.ಜಿಯಲ್ಲಿ ತಿಂಡಿ ಇಷ್ಟವಾದರೆ ತಿಂದು ಇಲ್ಲದಿದ್ದರೆ ದಾರಿಯಲ್ಲೇ ಇರುವ ಬೈಟು ಕಾಫ್ಹಿಯಲ್ಲಿ ಎರಡು ಇಡ್ಲಿ ಮತ್ತು ಎರಡು ವಡೆ ತಿಂದು ರೈಲು ಹತ್ತುತ್ತಿದ್ದನು.

ಇವತ್ತೂ ಕೂಡ ಎಂದಿನಂತೆ ಠಣ್ ಠಣ್ ಎಂದು ಬೊಬ್ಬೆಯಿಡುತ್ತಿದ್ದ ಮೇಸೆಜುಗಳನ್ನು ಆನಂದ ನೋಡಲಿಲ್ಲ. ಈಗಾಗಲೇ ಲೇಟ್ ಆದುದಕ್ಕೆ ಶೊ ಬದಲು ಚಪ್ಪಲಿಯನ್ನೇ ಹಾಕಿಕೊಂಡ. ನಾಳೆಯಿಂದಲಾದರೂ ಸ್ವಲ್ಪ ಬೇಗ ಎದ್ದು ಭಾನುವಾರ ತೊಳೆದಿಟ್ಟಿರುವ ಶೊಗಳನ್ನು ಹಾಕಿಕೊಂಡು ಹೋಗಬೇಕೆಂದು ಮನಸಿನಲ್ಲೇ ಅಂದುಕೊಂಡು ದೂಳಿಡಿದಿದ್ದ ಹೇಲ್ಮೆಟನ್ನು ಕೈಲಿ ಹಿಡಿದು ದಿನಾಲೂ ಗೊತ್ತಿರುವ ಹಾದಿಯಾದ ಕಾರಣ ಬೈಕು ತನ್ನ ಪಾಡಿಗೆ ತಾನು ಹೋರಟಿತು. ಅದೇ ಬೈಟು ಕಾಫ್ಹಿಯ ಬಳಿ ನಿಲ್ಲಿಸಿ ತಿಂಡಿ ತಿಂದು ಭರಭರನೇ ಬಂದು ರೈಲು ನಿಲ್ದಾಣದ ಹತ್ತಿರದಲ್ಲೇ ದಿನ ನಿಲ್ಲಿಸುವಲ್ಲಿ ಬೈಕು ನಿಲ್ಲಿಸಿದ. ಶ್ರೀ ಕೃಷ್ಣದೇವರಾಯ ಹಾಲ್ಟ್‌ನ ಬಳಿ ಪಾರ್ಕಿಂಗ್ ವ್ಯವಸ್ಥೆಯೇನು ಇಲ್ಲ. ಅಲ್ಲೇ ಹತ್ತಿರದ ಅಂಗಡಿಯ ಬಳಿ ಬೈಕು ನಿಲ್ಲಿಸಿ ಪ್ಲಾಟ್‌ಫಾರ್ಮ್ ಕಡೇ ಹೊರಟ. ದಾರಿಯಲ್ಲೇ ಮೊಬೈಲ್ ತೆಗೆದು ಮೊಬೈಲ್ ಸ್ಕ್ರಿನಿನ ಮೇಲೆ ಒತ್ತಿಕೊಂಡತ್ತೆ ಇದ್ದ ಮೇಸೆಜುಗಳ ಮೇಲೆ ಕಣ್ಣಾಡಿಸಿದ. ರೈಲು ತಡವಾಗಿರುವುದು ಆ ಮೇಸೆಜುಗಳಲ್ಲಿ ಇತ್ತು. ಮೊಬೈಲ್ ಅನ್ನು ಅನ್‌ಲಾಕ್ ಮಾಡಿ ಮತ್ತೆ ಎಲ್ಲಾ ಮೇಸೇಜುಗಳನ್ನ ನೋಡುತ್ತಾ ನಿಂತ. ಮೇಸೆಜು ಓದಿದ ಮೇಲೆ ಫೇಸ್ಬುಕ್ ತೆಗೆದ, ಅದನ್ನು ಮೇಲಿಂದ ಕೆಳಗೆ ಸ್ಕ್ರಾಲ್ ಮಾಡಿದ, ಒಂದಷ್ಟು ಪೋಸ್ಟ್‌ಗಳನ್ನು ನೋಡಿದ, ಕೆಲವು ಉದ್ದವಿದ್ದ ಕಾರಣ ಪೂರ್ತಿ ಓದದೇ ಲೈಕ್ ಒತ್ತಿದ. ಮತ್ತಷ್ಟು ಚೆಂದದ ಚಿತ್ರಗಳಿಗೆ ಫೇಸ್ಬುಕ್ಕಿನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಲವ್ ಸಿಂಬಲ್ ಒತ್ತಿದ. ಇವೆಲ್ಲ ರೈಲು ಬೋಗಿಗಳು ಒಂದರ ನಂತರ ಒಂದರಂತೆ ಅಂಟಿಕೊಂಡಂತೆ ಅವನ ಚಟುವಟಿಕೆಗಳು ಒಂದಕ್ಕೊಂದು ಅಂಟಿಕೊಂಡೆ ನಡೆದವು.

ಆನಂದ ವೈಟ್‌ಫೀಲ್ಡಿನಲ್ಲಿರುವ ಒಂದು ಕಂಪನಿಯಲ್ಲಿ ಮೂರು ವರ್ಶಗಳಿಂದ ಸಾಪ್ಟ್‌ವೇರ್ ಡೆವೆಲಪರ್ ಆಗಿ ಕೆಲಸ ಮಾಡುತ್ತಿದ್ದ. ಆನಂದನ ಊರು ತಿಪಟೂರು. ತಂದೆ ತಾಯಿ ಇಬ್ಬರೂ ಪ್ರೈಮರಿ ಸ್ಕೂಲಿನ ಮೇಷ್ಟ್ರುಗಳು. ಇಬ್ಬರೂ ತಿಪಟೂರಿನ ಅಕ್ಕ ಪಕ್ಕದ ಹಳ್ಳಿಗಳವರು. ಇಬ್ಬರೂ ತಿಪಟೂರಿನ ಸುತ್ತ ಮುತ್ತಲ ಶಾಲೆಗಳಲ್ಲಿ ಪಾಠ ಮಾಡಿಕೊಂಡು ತಿಪಟೂರಿನಲ್ಲಿ ಮನೆ ಮಾಡಿಕೊಂಡಿದ್ದರು. ಪಿಯುಸಿಯ ತನಕ ತಿಪಟೂರಿನಲ್ಲೇ ಓದಿದ್ದ ಆನಂದ ಇಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದಿದ್ದ. ಚಂದ್ರಲೇಔಟಿನ ಒಂದು  ಪಿಜಿಯಲ್ಲಿ ತನ್ನ ಬಿಡಾರ ಹೂಡಿದ್ದ. ಐದುನೂರು ರುಪಾತಿ ಜಾಸ್ತಿಯಾದರೂ ಟು ಶೇರಿಂಗ್ ರೂಮನ್ನು ಆಯ್ಕೆ ಮಾಡಿಕೊಂಡಿದ್ದ. ಇಂಜಿನಿಯರಿಂಗ್ ಮುಗಿದ ಮೇಲೆ  ಅವನ ಸ್ನೇಹಿತರ ಜೊತೆ ಒಂದು ವರ್ಶ ಬಾಡಿಗೆ ರೋಮಿನಲ್ಲಿದ್ದ. ಯುಪಿಯಸ್ಸಿ ಪರೀಕ್ಷೆಗಳಿಗೆ ಶತಾಯಗತಾಯ ಪ್ರಯತ್ನಿಸಲೇಬೇಕೆಂದು ಚಂದ್ರಲೇಔಟಿನ ಪಿ.ಜಿ ಹಿಡಿದಿದ್ದ. ವಿಜಯನಗರ ಮತ್ತು ಅತ್ತಿಗುಪ್ಪೆಯಲ್ಲಿ ಸಾಕಶ್ಟು ಯುಪಿಯಸ್ಸಿ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳಿರುವುದರಿಂದ ಬಹಳಶ್ಟು ಪಿ.ಜಿಗಳಲ್ಲಿ ಯುಪಿಯಸ್ಸಿ ವಿದ್ಯಾರ್ತಿಗಳೇ ಹೆಚ್ಚಿದ್ದರು. ಇಂಜಿನಿಯರಿಂಗ್ ಮುಗಿದ ತಕ್ಷಣ ಕ್ಯಾಂಪಸ್ ಪ್ಲೇಸ್‌ಮೆಂಟಿನಲ್ಲಿ ಸಿಕ್ಕಿದ್ದ ಕೆಲಸವನ್ನು ಬಿಟ್ಟು ಯುಪಿಯಸ್ಸಿ ಪರೀಕ್ಷೆ ಬರೆಯುವ ಆಸೆಯನ್ನು ಅವನ ಅಪ್ಪನ ಮುಂದಿಟ್ಟಿದ್ದ. ಅಪ್ಪ ಸಮಾಧಾನದಿಂದಲೇ ಯುಪಿಯಸ್ಸಿಯ ಬಗ್ಗೆ ಅವರಲ್ಲಿದ್ದ ಕಲ್ಪನೆಗಳನ್ನು ಹೊರಹಾಕಿ ಸದ್ಯಕ್ಕೆ ಒಂದೆರಡು ವರ್ಶ ಕೆಲಸ ಮಾಡು ಅಮೇಲೆ ಯುಪಿಯಸ್ಸಿಗೆ ತಯಾರಾಗುವಂತೆ ಎಂದಿದ್ದರು. ಕಷ್ಟಪಟ್ಟು ಪ್ರೈಮರಿ ಶಾಲೆಯ ಶಿಕ್ಶಕರಾಗಿದ್ದ ಅವರ ತಂದೆ ಇವನು ಕೈಗೆ ಸಿಕ್ಕಿರುವ ಕೆಲಸ ಬಿಡುವುದು ಇಷ್ಟವಿರಲಿಲ್ಲ. ಅಪ್ಪ ಅಮ್ಮ ಇಬ್ಬರೂ ಕ್ಯಾಂಪಸ್ ಪ್ಲೇಸ್‌ಮೆಂಟ್ ಆದ ದಿನವೇ ಅವರು ಪಾಠ ಮಾಡುವ ಶಾಲೆಗಳ ಎಲ್ಲರೀಗೂ ಸಿಹಿ ಹಂಚಿ ಹಿರಿಹಿರಿ ಹಿಗ್ಗಿದ್ದರು. ಅಮ್ಮನಿಗೆ ಇವನು ಯುಪಿಯಸ್ಸಿಗೆ ತಯಾರಾಗಲಿ ಎಂಬ ಆಸೆ ಇದ್ದರೂ ಅದನ್ನ ಹೇಳಲಿಲ್ಲ. ಕೆಲಸ ಮಾಡಿಕೊಂಡೇ ಯುಪಿಯಸ್ಸಿಗೆ ತಯಾರಿ ನಡೆಸುವ ಆಸೆ ಇಟ್ಟುಕೊಂಡು ಈಗಿರುವ ಪಿ.ಜಿಗೆ ಸೇರಿದ್ದ.

ರೈಲು ಬಂತು. ಮುಂದೆ ಬಂದು ನಿಂತ ಬೋಗಿಗೆ ಹತ್ತಿದ. ರೈಲಿನ ತುಂಬೆಲ್ಲಾ ಕಡ್ಲೆಕಾಯಿ ತಿಂದು ಬಿಸಾಕಿದ ಸಿಪ್ಪೆಗಳ ರಾಶಿ ಹರಡಿತ್ತು. ಎಲ್ಲರ ಕಾಲಿಗೂ  ಸಲಿಸಾಗಿ ಸಿಗುತ್ತಿತ್ತು. ಕೆಲವರು ತಮ್ಮೊಳಗೆ ಬೈದುಕೊಂಡರೂ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ರೈಲಿನಲ್ಲಿನ ಕಡ್ಲೇಕಾಯಿ ಸಿಪ್ಪೆಯ ಚಿತ್ರವೊಂದು ವಾಟ್ಸಾಪಿನಲ್ಲಿ ಹರಿದಾಡಿದರ ಬಗ್ಗೆ ಒಂದಷ್ಟು ಮಾತನಾಡಿ ಸುಮ್ಮನಾದರು. ಅದರ ನೆನಪಿರುವಷ್ಟು ದಿನ ಕಡ್ಲೇಕಾಯಿ ಸಿಪ್ಪೆಯನ್ನು ಆಚೆ ಎಸೆದರು. ಅದರ ನೆನಪು ಮಾಸಿದಂತೆ ಮತ್ತೇ ಬೋಗಿಗಳೇ ಕಡ್ಲೇಕಾಯಿ ಸಿಪ್ಪೆಗಳ ತಂಗುದಾಣಗಳಾದವು.  ಇಂತಹ ಕಡ್ಲೇಕಾಯಿ ಸಿಪ್ಪೆಯ ರಾಶಿಗಳು ಅಂದು ಆನಂದನ ಗಮನಕ್ಕೇನು ಬರಲಿಲ್ಲ. ದಿನಲೂ ಇದ್ದಂತೆಯೇ ಇಂದು ರೈಲು ಕಾಣಿಸಿತು. ಹೊಸತೇನು ಅಲ್ಲಿ ಕಾಣಲಿಲ್ಲ. ಅವನು ಹತ್ತುವ ಕೃಶ್ಣದೇವಾರಯ ಹಾಲ್ಟ್‌ನಲ್ಲಿ ಅವನಿಗೆ ಸೀಟು ಸಿಗುವುದು ಮತ್ತು ಅವನ ಪಿ.ಜಿಯಲ್ಲಿ ಮಾಡಿದ ತಿಂಡಿ ಚೆನ್ನಾಗಿರುವುದು ಎರಡೂ ಅತಿ ವಿರಳ ಸಂಗತಿಗಾಳಗಿದ್ದವು. ಸೀಟು ಹುಡುಕಿಕೊಂಡು ಒಳಗೆ ಹೋಗುವ ಮನಸು ಮಾಡಲಿಲ್ಲ. ಡಬ್ಬಲ್ ಡೋರ್‌ನಲ್ಲಿ ಹತ್ತಿದ ಸಲುವಾಗಿ ಬಲಗೈಲಿ ಜೋತು ಬಿದ್ದಿದ್ದ ಹ್ಯಾನ್ಡ್ ಹೊಲ್ಡರ್ ಹಿಡಿದು ತನ್ನ ಫೇಸ್ಬುಕ್ ಪಯಣ ಮುಂದುವರಿಸಿದ. ಸ್ವಲ್ಪ ದೂರದಲ್ಲೇ  ಲೌಡ್‌ ಸ್ಫೀಕರ್ ಹಾಕಿಕೊಂಡು ಟಿವಿ೯ ಸುದ್ದಿ ನೋಡುತ್ತ ಬೇರೆಯವರಿಗೆ ಕಿರಿಕಿರಿ ಮಾಡುತ್ತಿದ್ದವ, ತಮ್ಮ ಜೊತೆ ದಿನಾಲೂ ಸಂಚರಿಸುವ ಸಹಪ್ರಯಾಣಿಕರ ಗುಂಪು ಸೇರಲು ಹಿಂದಲಿಂದ ಮುಂದಕ್ಕೆ ಮುಂದಲಿಂದ ಹಿಂದಕ್ಕೆ ಹೋಗುತ್ತಿದ್ದವರು, ಇನ್ನೇನು ರಿಟೈರ್ಡ್ ಆಗಲಿರುವ ಸಹಪ್ರಯಾಣಿಕರ ಮಾತು, ಚಳಿಗೆ ಬೆಚ್ಚಗೆ ಮೈತುಂಬ ಜಾಕೇಟ್, ಸ್ವೆಟರ್ ಮತ್ತು ತಲೆಗೆ ಟೋಪಿ ಹಾಕಿ, ಕಿವಿಗೆ ಹೇಡ್‌ಫೋನ್ ಸಿಗಿಸಿಕೊಂಡು ಮಲಗಿದ್ದ ಜನ,  ಪಕ್ಕದಲ್ಲೇ ಫೋನಿನಲ್ಲಿ ಪಿಸುಗುಟ್ಟುತ್ತಿದ್ದವ, ಟೀ ಟೀ ಎಂದು ಕೂಗಿಕೊಂಡು ಬಂದ ಟೀ ಮಾರುವವನೂ ಆನಂದನ ಫೇಸ್ಬುಕ್ ಪ್ರಯಾಣವನ್ನು ನಿಲ್ಲಿಸಲಾಗಲಿಲ್ಲ.

ಅಂದು ರೈಲಿಗೆ ಸಿಗ್ನಲ್ ಸಿಗದ ಕಾರಣ ರೈಲನ್ನ ಮೆಜೆಸ್ಟಿಕ್‌ಗೆ ಮುಂಚೆಯೆ ನಿಲ್ಲಿಸಿದ್ದರಿಂದ ಆನಂದ ತನ್ನ ಮೊಬೈಲನ್ನು ಜೇಬಿಗೆ ಹಾಕಿ, ಡಬಲ್ ಡೋರಿಂದ ಬರುತ್ತಿದ್ದ ಬಿಸಿಲಿಗೆ ಮೈ ಒಡ್ಡಿ ನಿಂತ. ರೈಲು ನಿಂತ ಕಾರಣ ಕೆಲವಾರು ಜನ ಅಲ್ಲಿಯೇ ರೈಲು ನಿಲ್ಲುವುದಕ್ಕೂ ಮುಂಚೆಯೇ ಪಣ್ಣ್‌ನೆ ನೆಗೆದು ರೈಲ್ವೇ ಕಾಂಪೌಡ್ ಹಾರಿ ತಮ್ಮ ದಾರಿ ಹಿಡಿದರು.  ಜನರು ಇಳಿದಿದ್ದರಿಂದ ಕೆಲವು ಸೀಟುಗಳೂ ಖಾಲಿಯಾದವು. ಎಳೆಬಿಸಿಲು ಮೈಗೆ ಹಿತ ನೀಡುತ್ತಿದ್ದ ಕಾರಣ ಅಲ್ಲೇ ನಿಂತ.  ಆನಂದ ಕಾಟನ್ ಪೇಟೆ ರಸ್ತೆಯಲ್ಲಿ ಜೋರಾಗಿ  ಹೋಗುತ್ತಿದ್ದ ವಾಹನಗಳನ್ನು ಗಮನಿಸುತ್ತಾ ನಿಂತ. ಬೆಳಗ್ಗಿನ ಚಳಿಯ ಸುಲುವಾಗಿ ಅವನು ಕೆಲಸ ಮಾಡುವ ಕ್ಲೈಂಟ್ ನೆನಪಾದರು. ಅವನ ಕ್ಲೈಂಟ್  ಇರುವುದು ಶೀಕಾಗೊದಲ್ಲಿ. ನಿನ್ನೆ ರಾತ್ರಿ ತಾನೇ ಆನ್‌ಸೈಟ್‌ನಲ್ಲಿರುವ ಅವನ ಸಹೋದ್ಯೋಗಿಯ ಜೊತೆ ತಡರಾತ್ರಿ ಮೀಟಿಂಗ್ ಮಾಡಿ ಪ್ರಾಜೆಕ್ಟ್‌ಗೆ ಇದ್ದ ಸಣ್ಣ ಆಡಚಣೆಯನ್ನು ಪರಿಹರಿಸಿದ್ದ. ಅವನ ಸಹೋದ್ಯೊಗಿ ಅಲ್ಲಿ ಚಳಿಯಿಂದ ಸಾಯುತ್ತಿರುವ ಅಹವಾಲು ತೋಡಿಕೊಂಡಿದ್ದ. ಹುಟ್ಟಿದ್ದರಿಂದ ಬೆಂಗಳೂರಿನಲ್ಲೇ ಬೆಳೆದವನು ಅವನು. ಬೆಂಗಳೂರನ್ನು ಮಿಸ್ ಮಾಡಿಕೊಳ್ಳುತ್ತಿರುವುದನ್ನು ಹೇಳಲು ಮರೆಯಲಿಲ್ಲ ಅವನು.  ಆನಂದನ ಸಹೋದ್ಯೋಗಿ  ಮತ್ತು ಕ್ಲೈಂಟ್ ತನ್ನ ಮ್ಯಾನೇಜರ್‍ಗೆ ಕಳಿಸಿರಬಹುದಾದ ಥ್ಯಾಂಕ್ಯು ಇಮೇಲಿನ ಬಗ್ಗೆ ನೆನೆದು ಪುಳಕಿತನಾದ. ಆನ್‌ಸೈಟಿನಲ್ಲಿರುವ ಸಹೋದ್ಯೋಗಿ ಇನ್ನೇನು ತಿಂಗಳಿಗೆ ಬೆಂಗಳೂರಿಗೆ ಬರುವ ಸಾಧ್ಯತೆ ಇತ್ತು. ಪ್ರಾಜೆಕ್ಟ್ ಸಂಪೂರ್ಣ ಮುಗಿದಿರದ ಕಾರಣ ಇಲ್ಲಿಂದ ಮತೊಬ್ಬ ಹೋಗುವ ಎಲ್ಲ ಸಾಧ್ಯತೆ ಇದೆ. ಈ ಕಡೆ ಇವನು ಯುಪಿಯಸ್ಸಿಗೆ ತಯರಾಗಬೇಕೆಂದು ವಿಜಯನಗರದ ಪಿ.ಜಿಗೆ ಸೇರಿದ್ದಾನೆ. ಆದರೆ ಅಮೇರಿಕ ಕನಸು ಚಿಗುರುಡೆಯುತ್ತಿತ್ತು. ಯುಪಿಯಸ್ಸಿಯ ಸೆಳೆತವೂ ಅತಿಯಾಗೇ ಇತ್ತು. ಈ ಎಲ್ಲಾ ವಿಚಾರಗಳೂ ಅವನ ತಲೆಯನ್ನು ಹೊಕ್ಕು ಗಿರಕಿ ಹೊಡೆಯುತ್ತಿರಬೇಕಾದರೆ ರೈಲು ಹೊರಟು ಮೆಜೆಸ್ಟಿಕ್ ತಲುಪಿದ್ದು ಅವನ ಅರಿವಿಗೇ ಬರಲಿಲ್ಲ. ರೈಲು ನಿಲ್ಲುವುದಕ್ಕೂ ಮುಂಚೆಯೇ ನೆಗೆದು ತಮ್ಮ ಸಾಹಸ ಪ್ರದರ್ಶನ ಮಾಡುವವನೊಬ್ಬ ಇವನಿಗೆ ತಿವಿದು ಇಳಿತಿರಾ ಅಂದ. ಆಗ ಆನಂದನಿಗೆ ಮೆಜೆಸ್ಟಿಕ್ಕಿಗೆ ಬಂದದ್ದರ ಅರಿವಾಯಿತು. ಸಾಹಸಕಾರನಿಗೆ ದಾರಿ ಮಾಡಿಕೊಟ್ಟು ಜನರ ಮಧ್ಯೆ ದಾರಿ ಮಾಡಿಕೊಂಡು ಕಿಟಕಿಯ ಬಳಿಯ ಒಂದು ಸೀಟು ಹಿಡಿದ. ಇಲ್ಲಿಗೆ ಬಿಸಿಲು ಬಿಳುವುದಿಲ್ಲವೆಂದು ಅರಿತು ಮತ್ತೆ ತನ್ನ ಜಾಗ ಬದಲಿಸಿ ಬಿಸಿಲು ಬೀಳುವ ಕಿಟಕಿಯ ಪಕ್ಕಕ್ಕೇ ಹೋಗಿ ಕೂತ. ತನ್ನ ಮುಂದಲ ಸೀಟಿಗೆ ತನ್ನ ಬ್ಯಾಗ್ ಇಟ್ಟು ತನ್ನ ಸ್ನೇಹಿತನಿಗೆ ಕಾಲ್ ಮಾಡಿದ. ಸ್ನೇಹಿತನ ಫೋನು ಬ್ಯುಸಿ ಇತ್ತು. ವಾಟ್ಸಾಪು ಮೇಸೆಜು ಹಾಕಿದ. ಮೆಸೇಜಿನ ಮೇಲೆ ಟಿಕ್ ಮಾರ್ಕ್ ಬಾರದಿರುವುದನ್ನು ಗಮನಿಸಿ ರೈಲ್ವೇ ಸ್ಟೇಶನಿನಲ್ಲಿ ಡಟಾ ಕೆಲಸ ಮಾಡದಿರುವುದು ಗೊತ್ತಿದ್ದರೂ ಮತ್ತೆ ಬೈದ. ಯಾರಿಗೆಂದು ಅವನಿಗೂ ತಿಳಿದಿರಲಿಲ್ಲ. ಅಶ್ಟೊತ್ತಿಗೆ ಅವನ ಸ್ನೇಹಿತನ ಎಸ್ ಎಮ್ ಎಸ್ ಠಣ್ ಎಂದು ಬಂತು. ಆ ಎಸ್ ಎಮ್ ಎಸ್ ಕೇವಲ ಮೂರು ಅಕ್ಷರಗಳಿಂದ ಕೂಡಿತ್ತು. ಡಬ್ಲು ಎಫ್ ಎಚ್ ಎಂದಿತ್ತು. ಇವನ ಪ್ರಪಂಚದ ಅತಿ ಪ್ರಯೋಜಿತ ಅಕ್ರೊನಿಮ್‌ನ ಅರ್ಥ  working from home ಎಂಬುದು ಇವನಿಗೆ ತಿಳಿಯಿತು. ಎಂಜಾಯ್ ಎಂದು ಮೇಸೆಜ್ ಮಾಡಿ ಮತ್ತೆ ಬಿಸಿಲಿಗೆ ಮೈ ಒಡ್ಡಿ ಕೂತ.

ರೈಲು ಒಕಳಿಪುರಂನ ಮೇಲ್ಸೆತುವೆಯ ಸಲುವಾಗಿ ಎದ್ದಿದ್ದ ದೂಳನ್ನು ಸೀಳಿಕೊಂಡು ಕಂಟೋನ್‌ಮೆಂಟ್ ಕಡೆಗೆ ಚಲಿಸಿತು. ಆನಂದ  ಮುಂದಲ ಸೀಟಿನ ಮೇಲಿಟ್ಟಿದ್ದ ಬ್ಯಾಗನ್ನು ತೆಗೆಯುವುದನ್ನು ಮರೆತಿದ್ದ. ಸೀಟಿಗಾಗಿ ಹಿಂದಲ ಬೊಗಿಯಿಂದ ಮುಂದಕ್ಕೇ ಹೋಗುತ್ತಿದ್ದ ಹುಡುಗಿಯೋಬ್ಬಳು ಯಾರಾದರು ಬರ್ತಾರ ಅಂತ ಬ್ಯಾಗನ್ನು ನೋಡಿ ಕೇಳಿದಳು. ಇವನು ಪಕ್ಕನ್ನೆ ಎಚ್ಚೆತ್ತು,  ಲ್ಯಾಪ್‌ಟಾಪ್ ಬ್ಯಾಗನ್ನು ತೆಗೆದು ತನ್ನ ತೋಡೆಯ ಮೇಲಿಟ್ಟುಕೊಂಡ. ಹುಡುಗಿ ಥ್ಯಾಂಕ್ಯು ಹೇಳಿ ಕೂತಳು. ಎಳೆಬಿಸಿಲು ಹೋಗಿ ಕೈ ಚುರ್ ಎನ್ನುವ ಬಿಸಿಲಾಯಿತು. ಪಕ್ಕದಲ್ಲಿದ್ದ ಇಬ್ಬರು ಭಾರತ ಮತ್ತು ಅಸ್ಟ್ರೆಲಿಯಾ ತಂಡಗಳ ನಡುವಿನ ಕ್ರಿಕೇಟ್ ಬಗ್ಗೆ ಮಾತಾಡುತ್ತಿದ್ದರು. ಕೆ.ಎಲ್ ರಾಹುಲ್ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಇಬ್ಬರು ಪರಸ್ಪರ ಚರ್ಚಿಸುತ್ತಿದ್ದುದು ಇವನ ಕಿವಿಗೆ ಬಿದ್ದರೂ ಇವನು ಮಾತಾಡಲಿಲ್ಲ. ಮುಂದಿನ ಸೀಟಿನ ಹುಡುಗಿಯ ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬರು ಇನ್ನೇನು ಸ್ಟಾಕ್ ಮಾರ್ಕೇಟ್ ಓಪನ್ ಆಗುವ ಕಾರಣ ಮನಿ ಕಂಟ್ರೋಲ್ ಆಪ್ ನೋಡುತ್ತಿರುವುದನ್ನು ಗಮನಿಸಿದ. ಇವರನ್ನು ಮಾರ್ಕೆಟಿನ ಸ್ಥಿತಿಗತಿಗಳ ಬಗ್ಗೆ ಕೇಳಲಿಲ್ಲ. ಇವನೂ ಆಗ ತಾನೇ ಹಣ ಹೂಡಲು ಶುರುಮಾಡಿದ್ದ ಕಾರಣ ಯಾರಾದರೂ ಮನಿ ಕಂಟ್ರೋಲ್ ಆಪ್ ಬಳಸುವುದನ್ನು ಕಂಡರೆ ಸಾಕು ಮಾತಿಗಿಳಿಯುತ್ತಿದ್ದ. ಮೇಲೆ ಹೋಗುತ್ತಿರುವ ಕೇಳಗಿಳಿಯುತ್ತಿರುವ ಸ್ಟಾಕುಗಳ ಬಗ್ಗೆ ಚರ್ಚಿಸುತ್ತಿದ್ದ. ಕ್ರಿಕೇಟ್ ಕೂಡ ಇವನ ಅಚ್ಚು ಮೆಚ್ಚಿನ ಆಟ. ಕಂಟೋನ್‌ಮೆಂಟಿನಲ್ಲಿ ರೈಲು ತುಂಬಿಕೊಂಡಿತು. ಬಹಳಷ್ಟು ಜನ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಮುಳುಗಿದರು. ಬಹಳಶ್ಟು ಮುಖಗಳು ಪರಿಚಯದವು ಆದರೆ ತುಟಿ, ಬಾಯಿ ಮತ್ತು ಕಣ್ಣುಗಳು ಪರಿಚಯದ ಯಾವ ಲಕ್ಷಣಗಳನ್ನು ತೊರ್ಪಡಿಸುವುದಿಲ್ಲ. ಎಲ್ಲ ಪ್ರಯಾಣೀಕರೂ ದಿನವೂ ತಮ್ಮ ತಮ್ಮ ಕೆಲಸಗಳಿಗೆ ಹೋಗಲು ಬಳಸುವ ರೈಲಾದ ಕಾರಣ ಜನ ತಮ್ಮ ತಮ್ಮದೇ ಗುಂಪುಗಳನ್ನು ಮಾಡಿಕೊಂಡು ಅವರೊಟ್ಟಿಗೆ ಪ್ರಯಾಣ ಮಾಡುತ್ತಾರೆ. ಆನಂದನ ಕಂಪನಿಯಲ್ಲಿ ಕೆಲಸ ಮಾಡುವ ಬಹಳಶ್ಟು ಜನ ಇವನೊಟ್ಟಿಗೆ ಪ್ರಯಾಣ ಮಾಡಿದರೂ ಕೆಲವೇ ಕೆಲವು ಜನ ಇವನಿಗೆ ಪರಿಚಿತರು. ಇವನು ಮತ್ತು ಮೊತ್ತೊಬ್ಬ ಮಾತ್ರ ದಿನವೂ ಒಟ್ಟಿಗೆ ಪ್ರಯಾಣಿಸುವುದು ಸಾಮಾನ್ಯ. ಹೀಗಾಗಿ ಬೇರೆ ಯಾವ ಗುಂಪಿನವರು ಇವನನ್ನು ಕರೆಯುವುದಿಲ್ಲ. ಕೆಲವರು ನೋಡಿ ಒಂದು ಸಣ್ಣ ನಗು ಬೀರುತ್ತಾರೆ.

ಕಂಟೋನ್‌ಮೆಂಟ್ ದಾಟಿದ ಮೇಲೆ ದಿನವೂ ಒಂದು ಗೂನು ಬೆನ್ನಿನ ಅಜ್ಜಿ ಸಿಗುತ್ತಾರೆ. ಎಂದಿನಂತೆ ಇಂದೂ ಅಜ್ಜಿ ತನ್ನ ದರ್ಶನ ಮಾಡಿಸಿತು. ಎಡಗೈಯಲ್ಲಿ ಒಂದು ಕೊಲು ಹಿಡಿದು ನೆಲಕ್ಕೆ  ಹೂರಿತ್ತು. ಎಡ ಕೈಯಲ್ಲೇ ಒಂದು ಬ್ಯಾಗನ್ನು ಹಾಕಿಕೊಂಡಿತ್ತು. ಇವನು ಅವತ್ತು ಒಬ್ಬನೇ ಇದ್ದ ಕಾರಣ ಅಜ್ಜಿಯ ನೋಡಿ ನಗು ಮೊಗಗೊಂಡ.  ಪ್ರತಿ ದಿನವೂ ಇವನೇನು ದುಡ್ಡು ಕೊಡುವುದಿಲ್ಲ. ಅಪರೂಪಕ್ಕೆ ಎಂದಾದರೂ ಐದೋ ಹತ್ತೋ ರುಪಾಯಿ ಕೊಡುತ್ತಾನೆ. ಇವತ್ತು ಅಜ್ಜಿ "ಇದು ದಿನಾ ನೋಡುತ್ತೆ, ನಗುತ್ತೆ" ದುಡ್ಡು ಮಾತ್ರ ಕೊಡಲ್ಲ ಅಂತ ಅವನ ಅಕ್ಕಪಕ್ಕ ಕೂತಿದ್ದವರಿಗೆಲ್ಲ ಹೇಳಿತು.  ಕ್ರಿಕೇಟ್ ಬಗ್ಗೆ ಮಾತಾಡುತ್ತಿದ್ದವರು, ತನ್ನ ಮುಂದಿದ್ದ ಹುಡುಗಿ, ಮನಿ ಕಂಟ್ರೋಲ್‍ನಲ್ಲಿ ಮುಳುಗಿದ್ದವರು ಎಲ್ಲರೂ ಅಜ್ಜಿಯ ಮಾತಿಗೆ ಕಿವಿಗೊಟ್ಟರು. ಇವನಿಗೆ ಕಸಿವಿಸಿಯಾಯಿತು. ಮೊನ್ನೆ ಇನ್ನೂ ಐದು ರುಪಾಯಿ ಕೊಟ್ಟಿದ್ದ. ನಗುತ್ತಲೇ, "ಅಲ್ಲ ಕಣಜ್ಜಿ ಇಶ್ಟೊಂಡು ದುಡ್ಡು ಇಸ್ಕೊಂಡು ಏನ್ಮಾಡ್ತೀಯಾ?!" ಅಂದ. ಅಜ್ಜಿಯೂ ನಗುಮೊಗದಿಂದಲೇ ತನ್ನ ಬ್ಯಾಗಿಗೆ ಕೈ ಹಾಕಿ ಒಂದು ಟ್ಯೂಬ್ ತೆಗೆದು ತೋರಿಸಿತು. ಇದುಕ್ಕೆ ಹಾಕಬೇಕು ಕಣಪ್ಪ. ಡಾಕ್ಟ್ರು ಕೊಟ್ಟವರೆ. ಮೂರ್ಮುರು ದಿನಕ್ಕೂ ಬೇರೆದು ತಗೊಬೇಕು. ಇದುಕ್ಕೆ ಎಷ್ಟಾಗುತ್ತೆ ನೋಡೂ ಅಂತ ಇವನ ಕಡೆಗೆ ಟ್ಯೂಬ್ ತೋರಿಸಿತು.  ಇವನು "ಇರ್ಲಿ ಬಿಡು ಇಟ್ಕೋ" ಅಂತೇಳಿ ಸುಮ್ಮನಾದ. ಮುಂದಲ ಹುಡುಗಿ ಕ್ರೀಕೆಟ್ ಮಾತಡುತ್ತಿದ್ದವರಲ್ಲಿ ಒಬ್ಬ ತಲಾ ೧೦ ರುಪಾಯಿ ಕೊಟ್ಟರು ಅಜ್ಜಿ ಮುಂದೆ ಸಾಗಿತು. ಮತ್ತೆ ಬಗ್ಗಿಕೊಂಡು ಎಡಗೈಲಿ ಬ್ಯಾಗು ಮತ್ತು ಕೊಲನ್ನು ಹಿಡಿದು.

ಆನಂದ ಇವರೆನೆಲ್ಲಾ ಸರ್ಕಾರ ನೋಡಿಕೊಳ್ಳಬೇಕು. ನಾವೆಲ್ಲ ಮುವತ್ತು ಪರ್ಸೆಂಟ್ ಟ್ಯಾಕ್ಸ್ ಕಟ್ಟುವುದು ಏಕೆ ಎಂದುಕೊಂಡ.  ಅಲ್ಲ ಈ ಅಜ್ಜಿಗೆ ಮಕ್ಕಳು ಮರಿ ಇಲ್ವಾ, ಅವ್ರ್ಯಾಕೆ ನೋಡಿಕೊಳ್ತಿಲ್ಲ. ಇವರಿಗೆಲ್ಲ ನಾವ್ಯಾಕೆ ದುಡ್ಡು ಕೊಡಬೇಕು.  ಇಲ್ಲ ಈ ಅಜ್ಜಿನೇ ದುಡ್ಕೊಂಡು ಹೋಗಿ ಮಕ್ಕಳಿಗೆ ಕೊಂಡ್ತಿದಿಯಾ ಎಂದೂ ಪ್ರಶ್ನೇ ಮಾಡಿಕೊಂಡ. ಮೊನ್ನೆ ತಾನೇ ಪೇಪರಿನಲ್ಲಿ ಮುಂಬೈನಲ್ಲಿ ಬಿಕ್ಷುಕನೊಬ್ಬ ಲಕ್ಷಗಟ್ಟಲ್ಲೇ ದುಡ್ಡಿಟ್ಟಿರುವುದನ್ನು ನೋಡಿದ್ದ. ಸ್ಲಂ ಡಾಗ್ ಮಿಲಿಯನರಿ ಚಿತ್ರ ನೋಡಿದ ಮೇಲೆ ಬಿಕ್ಷುಕರಿಗೆ ಅದರಲ್ಲೂ ಮಕ್ಕಳಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿ ಬಿಟ್ಟಿದ್ದ. ಇವೆಲ್ಲ ದಂಧೆ ಎಂದು ಪ್ರಬಲವಾಗಿ ನಂಬಿದ. ಬಿಕ್ಶೇ ಬೇಡುವ ಮಕ್ಕಳು ಸಿಕ್ಕರೆ ಶಾಲೆಗೆ ಹೋಗಲ್ವ ನಿಮ್ಮ ಅಪ್ಪಅಮ್ಮನ ತೋರ್ಸಿ ಹೀಗೆ ಹಾಗೆ ಎಂದು ಅವರಿಗೆ ಪ್ರಶ್ನೆ ಇಟ್ಟು ಕಳಿಸುತ್ತಿದ್ದ. ಒಮ್ಮೆ ಮಧ್ಯ ಲಿಂಗಿಗಳು ಬಿಇಎಲ್ ಸರ್ಕಲ್‌ನ ಸಿಗ್ನಲ್ಲಿನಲ್ಲಿ ಹಣ ಕೇಳಿದಾಗ ಅವರೊಟ್ಟಿಗೆ ಜಗಳವಾಡಿದ್ದ. ಕೆಲಸ ಮಾಡುವುದಕ್ಕೆ ಅಗದಿಲ್ವ ಅಂದಿದ್ದ. ಅವರು ನಮ್ಗೆ ಕೆಲ್ಸ ಕೊಡಲ್ಲ ಅಂದುದ್ದಕ್ಕೆ. ಬನ್ನಿ ನಮ್ಮ ತೆಂಗಿನ ತೋಟದಲ್ಲಿ ಕೆಲಸವಿದೆ ಮಾಡ್ತೀರಾ? ಅಂದು ಪ್ರಶ್ನೆ ಮಾಡಿದ್ದ. ಇವನೇನು ತೋಟಕ್ಕೆ ಹೋಗಿ ಕೆಲ್ಸ ಮಾಡಿದವನಲ್ಲ. ಅಪ್ಪ ಮನೆಯಲ್ಲಿ ಊರಿನಲ್ಲಿ ಕೆಲ್ಸಕ್ಕೆ ಆಳುಗಳು ಸಿಗುತ್ತಿಲ್ಲವೆಂದು ಅಮ್ಮನ ಬಳಿ ಗೊಣಗುವುದನ್ನು ಕೇಳಿಸಿಕೊಂಡಿದ್ದ ಅಶ್ಟೇ. ಹೀಗೆ ಅವನದೇ ಕಾರಣಗಳಿಗಾಗಿ ದುಡ್ಡು ಕೊಡುವುದನ್ನು ನಿಲ್ಲಿಸಿದ್ದ. ಇತ್ತೀಚೆಗೆ ಈ ಅಜ್ಜಿಯನ್ನು ನೋಡಿದ ಮೇಲೆ ನೋಡಿದ ಮೇಲೆ ಆ ಕ್ಷಣಕ್ಕೆ ಕೊಡಬೇಕೆಂದರೆ ಮಾತ್ರ ಕೊಂಡಲು ಆರಂಭಿಸಿದ್ದಾನೆ. ಆದರೆ ನಿಜವಾಗಲೂ ಇನ್ನೊಬ್ಬರು ದುಡ್ಡು ಕೇಳಿದರೆ ಕೊಡಬೇಕಾ ಅನ್ನು ಪ್ರಶ್ನೆ ಪ್ರಬಲವಾಗಿ ಕಾಡತೊಡಗಿತು. ನಾನಾರು ಮತ್ತೊಬ್ಬರಿಗೆ ಕೊಡುವುದಕ್ಕೆ? ದೇವರಿಗೆ ಕೊಡಬೇಕೆಂದರೆ ಅವನೇ ಕೊಡ್ತಾನೆ ಅಂದ. ಮತ್ತೊಬ್ಬ ಮನುಷ್ಯನಿಗೆ ಕನಿಶ್ಟ ಅಗತ್ಯತೆಗಳಾದ ಊಟ ನೀರನ್ನು ಕೊಡಬೇಕಾಗಿರುವುದು ನಮ್ಮೇಲ್ಲರ ಧರ್ಮವಲ್ಲವಾ!? ನನ್ನ ಬಳಿ ಹೆಚ್ಚಿದ್ದು ಇನ್ನೊಬ್ಬನ ಬಳಿ ಇಲ್ಲದಿದ್ದರೆ ಅದಕ್ಕೆ ಕಾರಣವಾರು. ಆದ್ರೆ ಈ ಕುಟುಂಬ, ಮಕ್ಕಳು, ಊರು, ಮುನ್ಸಿಪಾಲಿಟಿ, ರಾಜ್ಯ, ದೇಶ, ಸರ್ಕಾರಗಳನ್ನು ಮಾಡಿಕೊಂಡಿರುವುದು ಯಾಕೆಂದೂ ಪ್ರಶ್ನೀಸಿದ? ಪ್ರತಿಯೊಬ್ಬರಿಗೂ ಊಟ, ನೀರು, ಹವಮಾನಕ್ಕೆ ತಕ್ಕಂತೆ ಬಟ್ಟೆ ಮತ್ತು ಮಳೆಗೆ ನೆನೆಯದ ಹಾಗೇ ಜಾಗ ದಕ್ಕಬೇಕಾಗಿರುವುದು ಧರ್ಮವಲ್ಲವೇ? ನಾನು ಕೊಟ್ಟರೆ ಅಜ್ಜಿ ಮಿಸ್‌ಯುಸ್ ಮಾಡಿಕೊಂಡರೂ ಮಾಡಿಕೊಳ್ಳಲೂ ಬಹುದು ಎಂದು ತನಗೆ ತಾನೆ ಸಮಜಾಯಿಸಿ ಮಾಡಿಕೊಂಡ. ಅವನು ಅವನ ಅಫೀಸಿಗೆ ಹೋಗಿ ತನ್ನ ಚೇರಿನಲ್ಲಿ ಕೂತರೂ ಈ ಯೋಚನೆಗಳು ಅವನನ್ನು ಬಿಡಲಿಲ್ಲ. ಅವನ ಮ್ಯಾನೇಜರ್ ಬಂದು ಖುಶಿಯಿಂದ ಮಾತಾಡಿಸಿ, ನಿನ್ನೆಯ ಕೆಲಸಕ್ಕೆ ಥ್ಯಾಂಕ್ಸೇಳಿ ಮತ್ತಷ್ಟು ಕೆಲಸ ಹೇಳಿ ಹೋದ. ಇವನು ಮತ್ತೆ ಡಿಸೈನು, ಅರ್ಕಿಟೆಕ್ಚರು, ಡೆವೆಲಪ್‌ಮೆಂಟಿನೊಳಗೆ ಮುಳಿಗಿಕೊಂಡ.   


Friday, October 5, 2018

ಅರ್ಥ

ಇಂಗ್ಲೀಶ್ ಕಥೆ ಪುಸ್ತಕಗಳನ್ನು ಮೊದ ಮೊದಲು ಓದಲು ಶುರು ಮಾಡಿದಾಗ, ಪ್ರತಿ ಪುಟದಲ್ಲೂ ಹತ್ತರಿಂದ ಇಪ್ಪತ್ತು ಪದಗಳ ಅರ್ಥವೇ ತಿಳಿಯುತ್ತಿರಲಿಲ್ಲ. ಕೆಲವೊಮ್ಮೆ ವಾಕ್ಯಗಳ ಅರ್ಥವೂ ತಿಳಿಯುತ್ತಿರಲಿಲ್ಲ. ಆ ಹತ್ತಿಪ್ಪತ್ತು ಪದಗಳನ್ನು ಅಂಡರ್ ಲೈನ್ ಮಾಡಿ ಪ್ರತಿ ಪುಟ ಓದಿದ ಮೇಲೆ ಆ ಎಲ್ಲ ಪದಗಳ ಅರ್ಥವನ್ನು ಪಕ್ಕದಲ್ಲಿರುತ್ತಿದ್ದ ಡಿಕ್ಶನರಿಯಿಂದ ಅರ್ಥ ಮಾಡಿಕೊಂಡು ಮತ್ತೆ ಮುಂದಕ್ಕೆ ಹೋಗಬೇಕಾಗಿತ್ತು. ನಡಿಗೆ ಆಮೆಯ ವೇಗಕ್ಕಿಂತಲೂ ಕಡಿಮೆ. ಹೋಲಿಕೆ ಮಾಡದಿರುವುದೇ ಲೇಸು.
ಹಾಗೆಯೇ, ನನಗೆ ಪದ್ಯಗಳು(ಕನ್ನಡದ) ಅರ್ಥವಾಗುತ್ತಿರಲಿಲ್ಲ. ಈಗ ಅರ್ಥವಾಗುತ್ತವೆ ಎಂದಲ್ಲ. ಕೆಲವು ಬಹಳ ಸಿಂಪಲ್ಲಾದವು ಎಂದೆನಿಸಿದರೂ, ಮತ್ತೆ ಕೆಲವು ಬ್ರಹ್ಮಾಂಡದ ಎಲ್ಲಾ ಕಷ್ಟ ಪದಗಳನ್ನು ಕವಿ ಬಳಸಿದ್ದಾನೆ ಎಂದೆನಿಸುತ್ತಿತ್ತು. ಕೆಲವನ್ನು ಕಷ್ಟ ಪಟ್ಟು, ಕೆಲವರನ್ನು ಕೇಳಿ, ಮತ್ತೆ ಕೆಲವನ್ನು ರೆಫ಼ೆರ್ ಮಾಡಿ ಅರ್ಥಯಿಸಿಕೊಳ್ಳುತ್ತಿದ್ದೆ.
ಈಗೀಗ ನನಗೆ ಅರ್ಥವಾಯಿತೇ ಎಂದು ನಾನು ನನ್ನನ್ನು ಕೇಳಿಕೊಳ್ಳುವುದನ್ನೇ ನಿಲ್ಲಿಸಿದ್ದೇನೆ. ಕೆಲವೊಮ್ಮೆ ನಾಟಕಗಳನ್ನು ನೋಡಿದಾಗ ಒಂದಷ್ಟು ಅರ್ಥವಾಗುತ್ತವೆ, ಮತ್ತೊಂದಷ್ಟು ಏನೂ ತಿಳಿಯುವುದಿಲ್ಲ. ಕವಿತೆಗಳನ್ನು ಓದಿದಾಗ ಅರ್ಥಗಳನ್ನ ಹುಡುಕುವ ಗೋಜಿಗೆ ಹೋಗುವುದಿಲ್ಲ. ಕೆಲವು ಕವಿತೆಗಳನ್ನ ಬೇರೆ ಸ್ನೇಹಿತರ ಬಳಿ ಚರ್ಚಿಸಿದರೆ ಅವರ ಅರ್ಥಕ್ಕೂ ನನ್ನ ಅರ್ಥಕ್ಕೂ ಸಾಕಷ್ಟು ವ್ಯತ್ಯಾಸ ಕಾಣುತ್ತದೆ.
ಕಥೆ, ಕಾದಂಬರಿ, ಪದ್ಯಗಳನ್ನು ಓದುವಾಗ, ನಾಟಕ ಸಿನಿಮಾಗಳನ್ನು ನೋಡುವಾಗ ಮತ್ತು ಆಫಿಸಿನಿಲ್ಲಿ ಬೇರೆಯವರು ಬರೆದ ಕೋಡ್ ನೋಡುವಾಗ ಎಲ್ಲವೂ ಅರ್ಥವಾಗಬೇಕೆಂಬ ಅಚಲ ಆಸೆಯನ್ನು ಬಿಟ್ಟುಬಿಟ್ಟಿದ್ದೇನೆ. ಅದನ್ನು ಬದುಕಿನಲ್ಲೂ ಕಂಡುಕೊಳ್ಳಬೇಕಿದೆ.

Saturday, November 29, 2014

ಗಿರಿಗದ್ದೆಯಲ್ಲಿ ಸಮಾನತೆಯ ಪಾಠ

ಅಸಮಾನತೆ ಅನ್ನುವುದು ನಮ್ಮೊಳಗೆ, ಎಲ್ಲರೊಳಗೆ, ಎಲ್ಲದರೊಳಗೆ ಬೆರೆತು ನಮ್ಮನ್ನು ಮರೆಯಿಸುತ್ತಿರಬೇಕಾದರೆ ಕೆಲವು ಘಟನೆಗಳು, ಕೆಲವು ಜನರು, ಕೆಲವು ಪದ್ಧತಿಗಳು ಸಮಾನತೆಯನ್ನು ಜಾರಿಗೆ ತರುತ್ತಿವೆ. ಕುಕ್ಕೆ ಸುಬ್ರಮಣ್ಯ ಮಡೆಸ್ನಾನ ಎನ್ನುವ ಹೆಸರಿನಲ್ಲಿ ಬಹಳ ಸದ್ದು ಗದ್ದಲ ಎಬ್ಬಿಸುತ್ತಲಿರುತ್ತದೆ. ಮೊನ್ನೆ ಉಡುಪಿಯಲ್ಲಿ ಊಟದ ಪಂಕ್ತಿಯಿಂದ ಒಬ್ಬರನ್ನು ಮಧ್ಯದಲ್ಲೆ ಎಬ್ಬಿಸಿದರು ಎನ್ನುವ ಸುದ್ದಿ ಎಲ್ಲ ಕಡೆ ಸದ್ದು ಮಾಡಿತ್ತು. ಪಂಕ್ತಿ ಊಟ ಬೇಕೋ ಬೇಡವೋ ಅಥವಾ ಮಡೆಸ್ನಾನ ಬೇಕ ಬೇಡವೋ ಎನ್ನುವ ವಾದಕ್ಕೆ ಇಳಿಯದೆ, ಸುಬ್ರಮಣ್ಯದ ಗಿರಿಗದ್ದೆಯಲ್ಲಿ ಸಮಾನತೆಯ ಸಮಾರಾಧನೆಯ ಬಗ್ಗೆ ಬರೆಯೋಣ ಏಂದು ಅನಿಸಿತು.

ಗಿರಿಗದ್ದೆಯಲ್ಲಿ ಏನಿದೆ ಎಂದು ನಿಮಗೆ ಅನಿಸುತ್ತಿರಬಹುದು. ಅಲ್ಲಿ ಯವೂದೇ ಮಠವಾಗಲಿ, ದೇವಸ್ಥಾನವಾಗಲಿ ಮತ್ತೊಂದಾಗಲಿ ಇಲ್ಲವೇ ಇಲ್ಲ. ಆದರೆ ಗಿರಿಗದ್ದೆಯಲ್ಲಿ ಭಟ್ಟರ ಮನೆಯಿದೆ. ಕುಮಾರ ಪರ್ವತಕ್ಕೆ ಚಾರಣಕ್ಕೆ ಹೋಗುವ ಎಲ್ಲರಿಗೂ ಬೆಳಗ್ಗೆ ತಿಂಡಿ ಬೇಕಾದರೆ ತಿಂಡಿ, ಮಧ್ಯಾನದ ಊಟ ಬೇಕಾದರೆ ಊಟ ಮತ್ತು ರಾತ್ರಿ ಉಳಿದುಕೊಳ್ಳಬಯಸುವವರು ಅಲ್ಲಿಯೇ ತಂಗಿ ಊಟ ಮಾಡಿಕೊಂಡಿರಬಹುದು. ಇದರಲ್ಲೇನಿದೆ ಎಂದು ನಿಮಗೆ ಅನಿಸುತ್ತಿರಬೇಕು! ಭಟ್ಟರು ಊಟವನ್ನು ಪುಕ್ಕಟೆಯಾಗಿ ಹಾಕುವುದಿಲ್ಲ, ಆದರೆ ಎಲ್ಲರಿಗೂ ಊಟವಿರುತ್ತೆ. ಎಲ್ಲರಿಗೂ ಒಂದೇ ಊಟ. ತಟ್ಟೆಗಳನ್ನು ಮತ್ತು ಮಜ್ಜಿಗೆಗೆ ಕಪ್ಪುಗಳನ್ನು ಇಟ್ಟಿರುತ್ತಾರೆ, ಎಲ್ಲರೂ ಊಟ ಮಾಡಿ ತಟ್ಟೆಗಳನ್ನು ತೊಳೆದು ಮೊದಲಿದ್ದ ಜಾಗದಲ್ಲಿ ಇಡಬೇಕು. ಒಂದೇ ರೀತಿಯ ಊಟ, ನಿಮ್ಮ ಹತ್ತಿರ ಎಷ್ಟೇ ದುಡ್ಡಿದ್ದರೂ ಅನ್ನ, ಸಾರು ಮತ್ತು ಮಜ್ಜಿಗೆ ಬಿಟ್ಟರೆ ಬೇರೆನನ್ನು ಕೊಡಲ್ಲ. ಅವರ ಬಾಳೆ ತೋಟದ ಬಾಳೆಹಣ್ಣು ಇದ್ದರೆ ಕೊಡುತ್ತಾರೆ. ಮಲಗಲು ಅಷ್ಟೇ, ಯಾರು ಮೊದಲು ಬರುತ್ತಾರೆ ಅವರಿಗೇ ಮೊದಲ ಆದ್ಯತೆ. ಭಟ್ಟರ ಮನೆ ಮೊದಲು ಹೇಗಿತ್ತೊ ಇವತ್ತೂ ಹಾಗೆ ಇದೆ.
ಇದು ಗೂಗಲ್‍ನಿಂದ ತೆಗೆದಿದ್ದು. 

ಮೊನ್ನೆ ನಾವು ಭಟ್ಟರ ಮನೆಗೆ ಹೋದಾಗ ತೆಗೆಸಿಕೊಂಡ ಪಟ. ಇನ್ನೊಬ್ಬ ಭಟ್ಟರು, ಊಟದ ನಂತರ ಮಲಗಿಬಿಟ್ಟರು. 


ನಿಮಗೆ ಮತ್ತೂ ಅನಿಸುತ್ತಿರಬೇಕು ಇದರಲ್ಲೇನು ವಿಶೇಷ ಎಂದು. ನಾನು ಸಾಕಷ್ಟು ಕಡೆ ಚಾರಣಕ್ಕೆ ಹೋಗಿದ್ದೇನೆ. ಎಲ್ಲ ಕಡೆಯೂ ನಗರಗಳಲ್ಲಿ ಏನೇನು ಸಿಗುತ್ತದೆ ಅದನ್ನೇಲ್ಲ ತಂದು ದುಬಾರಿ ಬೆಲೆಗೆ ಮಾರುವ ಅಂಗಡಿಗಳು ಸಿಗುತ್ತವೆ. ದೂರದ ಹಿಮಾಲಯದ ಚಾರಣ ತಾಣಗಳಿಂದ ಇಡಿದು, ನಮ್ಮ ಸುತ್ತಲ ಬೆಟ್ಟಗಳಲ್ಲಿರುವ ಅಂಗಡಿಗಳು ಹೊರತಲ್ಲ. ಭಟ್ಟರ ಮನೆಯಲ್ಲಿ ಟಿ.ವಿಯಿದೆ, ಅವರ ಹತ್ತಿರ ಮೊಬೈಲ್ ಕೂಡ ಇದೆ. ನಗರಗಳ ಪರಿಚಯವಿದೆ. ಆದರೂ ಅವರ ಮನೆಯಲ್ಲಿ ಎಲ್ಲರೂ ಒಂದೇ.

ನಾಗರೀಕತೆಯಿಂದ ಜಾಗತೀಕರಣದವರೆಗೆ ಬೆಳೆದ ನಾವು ಅಸಮಾನತೆಯನ್ನು ಮಾತ್ರ ಹೆಚ್ಚಿಸುತ್ತಲೇ ಬಂದಿದ್ದೇವೆ. ಆದರೆ ಗಿರಿಗದ್ದೆ ಭಟ್ಟರಂತವರು ತಿಳಿದೋ ತಿಳಿಯದೆಯೋ ಸಮಾನತೆಯ ಗಿಡವನ್ನು ಪೋಷಿಸುತ್ತಿದ್ದಾರೆ. ಬಸವಣ್ಣ ಮತ್ತು ಗಾಂಧಿಜೀ ಇದನ್ನೆ ಅಲ್ಲವೇ ಮಾಡಿದ್ದು.    

Thursday, November 27, 2014

ಪೇರ್ ಪ್ರೊಗ್ರಾಮಿಂಗ್

ಮೊನ್ನೆ ನನ್ನ ಆಫೀಸಿನ ಮೇಲ್‍ಡಬ್ಬಿಗೆ ಒಂದು ಮೇಲ್ ಬಂದು ಬಿತ್ತು. ಅದು ನಮ್ಮ ವಿ.ಪಿ ಕಳಿಸಿದ ಮೇಲ್. ಮತ್ತೆ, ಅದೇ ಪ್ರಯೋಜನಕ್ಕೆ ಬಾರದ ಮೇಲ್ ಇರಬೇಕು ಎಂದು ಡಿಲಿಟೆಡ್ ಎಂದು ಇರುವ ಮತ್ತೊಂದು ಡಬ್ಬಿಗೆ ಆದನ್ನು ದಬ್ಬಿದ್ದೆ. ದಿನಾಲೂ ಸಾಲ ಬೇಕಾ ಎಂದು ಬರುವ ರೀತುವಿನ ಮೇಲ್, ಅಪರ್ಟ್‍ಮೇಂಟ್ ಬೇಕಾ ಎಂದು ಬರುವ ಮಹಿಮಾಳ ಮೇಲ್,  ಕ್ರೇಡಿಟ್ ಕಾರ್ಡ್ ಬೇಕಾ ಎಂದು ಬರುವ ಟೀನಾಳ ಮೇಲ್‍ನೇ ಓದದೆ ಡಿಲಿಟೆಡ್ ಡಬ್ಬಿಗೆ ದಬ್ಬುತ್ತಿರುವಾಗ, ಇನ್ನೂ ವಿ.ಪಿಯಿಂದ ಬರುತ್ತಿರುವ ಮೇಲ್‍ಗೆ ಆ ಗತಿ ಕಾಣಿಸಿದ್ದು ತಪ್ಪಿಲ್ಲ ಎಂದು ಹೇಳುತ್ತಿತ್ತು ಮನಸು ಆ ದಿನ. ನಮ್ಮ ಚಾಳಿ ತಿಳಿದೋ ಏನೋ ನಮ್ಮ ಅಫೀಸುಗಳಲ್ಲಿ ನಮ್ಮನ್ನು ಕಾಯಲೆಂದೇ ಮ್ಯಾನೇಜರ್‌ಗಳಿರುತ್ತಾರೆ. ಸಾಮಾನ್ಯವಾಗಿ ಇವರ ಮೂಲಕವೇ ನಮ್ಮ ಕೆಲಸ ಕಾರ್ಯಗಳು ನಡೆಯುವುದು. ಆ ದಿನ ಸೋಮವಾರ, ಮಧ್ಯಾನದ ಸಮಯಕ್ಕೆ ಒಂದು ಮೀಟಿಂಗ್ ರಿಕ್ವೇಸ್ಟ್ ನನ್ನ ಮೇಲ್ ಡಬ್ಬಿಗೆ ಬಂದು ಬಿತ್ತು.  ಆದರ ವಿಷಯ "Discussion about implementing pair programming in the team" ಎಂದು ಇತ್ತು. ಅದು ಪೇರ್ ಪ್ರೊಗ್ರಾಮಿಂಗ್ ಅನ್ನು ನಮ್ಮ ಟೀಮ್‍ನಲ್ಲಿ ಅಳವಡಿಸುವ ಕುರಿತಾದ ಮಾತುಕತೆಗೆ ಆಹ್ವಾನ.  ಕೆಳಗೆ ಅದರ ಬಗ್ಗೆ ಸಂಕ್ಷಿಪ್ತವಾಗಿ ಬರೆಯಲಾಗಿತ್ತು. ಒಂದೆರಡು ಅದರ ಕುರಿತಾದ ಲೇಖನಗಳನ್ನು ಮೀಟಿಂಗ್ ರಿಕ್ವೇಸ್ಟ್‌ಗೆ ಅಂಟಿಸಲಾಗಿತ್ತು.  ಇದರ ಬಗ್ಗೆಯೇ ನಮ್ಮ ವಿ.ಪಿಯಿಂದ ಮೇಲ್ ಬಂದಿದ್ದು, ಅವರು ನಮ್ಮ ಎಲ್ಲ ಟೀಮ್‍ಗಳಲ್ಲಿ ಪೇರ್ ಪ್ರೊಗ್ರಾಮಿಂಗ್ ಮಾಡಬೇಕೆಂದು ಫರ್ಮಾನು ಹೋರಡಿಸಿದ್ದರು.

ಪೇರ್ ಪ್ರೊಗ್ರಾಮಿಂಗ್ ಅಂದರೆ ಇಬ್ಬರು ಒಂದೇ ಕಂಪ್ಯೂಟರಿನ ಮುಂದೆ ಕೂತು ಒಂದೇ ಕೆಲಸ ಮಾಡುವುದು ಎಂದು. ಪ್ರೊಗ್ರಾಮ್ ಅಂದರೆ, ಬರೆದವನನ್ನು ಹೊರತುಪಡಿಸಿ ಬೇರೆ ಯಾರಿಗೂ ಸರಿಯಾಗಿ ಅರ್ಥವಾಗದೇ ಕಂಪ್ಯೂಟರ್‌ಗೆ ಮಾತ್ರ ಅರ್ಥವಾಗುವ ಕೆಲವು ಸಂಬಂಧಿ ವಾಕ್ಯಗಳು. ಈ ಕಂಪ್ಯೂಟರಿನ ವಾಕ್ಯಗಳನ್ನು ಒಬ್ಬರು ಬರೆದರೆ ಹೆಚ್ಚು ದೊಷಪೂರಿತವಾಗಿರುತ್ತವೆ ಎಂದು ನಂಬಿ ಇತ್ತೀಚಿನ ದಿನಗಳಲ್ಲಿ ಇಬ್ಬರು ಕೂತು ಬರೆಯುತ್ತಾರೆ. ಇದರ ಮೇಲೆ ಒಂದೆರಡು ತರಬೇತಿಗಳನ್ನು ನಡೆಸಲಾಯಿತು. ನಮ್ಮ ಟೀಮ್ ಒಳಗೆ ಮತ್ತೊಂದು ಬಾರಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಇವೆಲ್ಲವೂ ಇಲ್ಲಿ ನಡೆಯುತ್ತಿರಬೇಕಾದರೆ ಒಂದು ಶನಿವಾರ ಊರಿಗೆ ಹೋಗಿದ್ದೆ. ಊರೇನು ಬಹಳ ದೂರವಿಲ್ಲದ ಕಾರಣ ಬೆಂಗಳೂರಿನಲ್ಲಿ ಮಾಡಲು ಏನೂ ಕೆಲಸವಿಲ್ಲದಿದ್ದರೆ ಕೆಂಪು ಬಸ್ ಹಿಡಿದು ಹಳ್ಳಿ ಸೇರುವುದು ಮೊದಲಿನಿಂದಲೂ ಮಾಡಿಕೊಂಡು ಬಂದ ಸುಕಾರ್ಯ.

ಈ ಬಾರಿ ಹೋದಾಗ ಮುಂಗಾರಿನ ಮಳೆ ಚೆನ್ನಾಗಿಯೇ ಆಗಿತ್ತು. ಕೆಲವು ರೈತರು ಬಿತ್ತನೆ ಕಾರ್ಯವನ್ನು ಶುರು ಮಾಡಿದ್ದರು. ನಮ್ಮ ಮನೆಯಲ್ಲಿ ಹೊಲ ಹೆಚ್ಚಿಲ್ಲದ ಕಾರಣ ತೋಟಗಳಲ್ಲಿ ಸಮೃಧಿಯಾಗಿ ಬೆಳೆದಿದ್ದ ಕಾಂಗ್ರೆಸ್ ಗಿಡಗಳನ್ನು ನಾಶಮಾಡಲು ಒಂದೆರಡು ಬಾರಿ ಟ್ರಾಕ್ಟ್‌ರ್‌ನಲ್ಲಿ ಉಳುಮೆ ಮಾಡಿ ಮುಗಿಸಿಯಾಗಿತ್ತು. ಶನಿವಾರ ನಮ್ಮೆಲ್ಲ ತೋಟಗಳನ್ನು ಅಡ್ಡಾಡಿ ಸಂಜೆಯಾಗುತ್ತಿದ್ದಂತೆ ಪಕ್ಕದ ಊರಿನಲ್ಲಿರುವ ನಮ್ಮ ದೊಡ್ಡಪ್ಪನ ಊರಿಗೆ ಹೋದೆ. ನಮ್ಮ ದೊಡ್ಡಪ್ಪನಿಗೆ ಹೊಲ ಚೆನ್ನಾಗಿಯೇ ಇದೆ. ಮುಂಗಾರಿನಲ್ಲಿ ಸೂರ್ಯಕಾಂತಿ ಅಥವ ನೆಲಗಡಲೆ ಬೆಳೆದರೆ ಹಿಂಗಾರಿನಲ್ಲಿ ಹುರುಳಿ ಬೆಳೆಯುತ್ತಿದ್ದರು. ಈ ಬಾರಿ ಟ್ರಾಕ್ಟ್‌ರ್‌ನಲ್ಲಿ ಒಮ್ಮೆ ಹೊಲವನ್ನೆಲ್ಲ ಉಳುಮೆ ಮಾಡಿಸಿ, ಪಕ್ಕದೂರಿಗೆ ಹೋಗಿ ಕಳೆ ಆಯುವವರನ್ನು ಕರೆದು ತಂದು, ಅವರಿಗೆ ಸಂಬಳದ ಜೊತೆ ಒಂದು ನೈಂಟಿ ಹಾಕಿಸಿ ಹೊಲದ ಕಳೆಯನ್ನೆಲ್ಲ ಆಯಿಸಿಯಾಗಿತ್ತು. ಕೆಂಪು ನೆಲದ ಹೊಲ, ಎರಡು ಮಗ್ಗಲ ಬೇಸಾಯಕ್ಕೆ ಯಂಟೆಗಳೆಲ್ಲ ಚೂರಾಗಿ ಮಂಗಳೂರಿನ ಕಡಲ ಮರಳಿನಂತೆ, ಉಪ್ಪಿಟ್ಟಿನ ರವೆಯಂತೆ ಉದುರಾಗಿ ಹೋಗಿದೆ. ಬಿತ್ತಲು ಬೀಜ, ಗೊಬ್ಬರ ಮತ್ತು ಬಿತ್ತಲು ಬೇಕಾದ ಕೂರಿಗೆ ತಯಾರಾಗಿದೆ. ಪ್ರತಿ ಸಲ ಬಿತ್ತಲು ಬರುತ್ತಿದ್ದ ಈರಮ್ಮ ಈ ಬಾರಿ ಬರದ ಕಾರಣ ನಮ್ಮ ದೊಡ್ಡಮ್ಮನೇ ಬಿತ್ತುವುದು ಎಂದು ತೀರ್ಮಾನವಾಗಿದೆ. ಆದರೆ ಮುಖ್ಯವಾಗಿ ಕೂರಿಗೆ ಮುನ್ನಡೆಸಲು ಜೋಡಿ ಎತ್ತುಗಳು ಸಿಗುತ್ತಿಲ್ಲ. ನೂರು ಮನೆಯ ಹಳ್ಳಿ. ಊರನ್ನೆಲ್ಲ ಒಂದು ಸುತ್ತು ಬಂದರೂ ಒಂದು ಜೊತೆ ಎತ್ತು ಆ ದಿನಕ್ಕೆ ಇಲ್ಲ. ಊರಲ್ಲೆಲ್ಲ ಇರುವುದೇ ಮೂರೋ ನಾಲ್ಕೋ ಜೊತೆ ಎತ್ತುಗಳು. ಆ ಎತ್ತುಗಳಿಗೆ ಎಲ್ಲಿಲ್ಲದ ಪೈಪೂಟಿ. ಅವುಗಳ ಮಾಲೀಕರಿಗೆ ಎಲ್ಲಿಲ್ಲದ ಬೆಲೆ. ರಾತ್ರಿ ನೈಂಟಿ ಗ್ಯಾರೆಂಟಿ, ನೈಂಟಿ ಹಾಕದವರಿಗೆ  ಬೇರೆ ರೀತಿಯಲ್ಲಿ ವ್ಯವಸ್ಥೆ ಇದ್ದೆ ಇರುತ್ತೆ. 

ರಾತ್ರಿ ಊಟವಾದ ಮೇಲೆ ಬತ್ತಿದ ಬಾವಿಯ ದಡದಲ್ಲಿ ಕೂತು, ಮೇಲೆ ನಕ್ಷತ್ರಗಳನ್ನು ಏಣಿಸುತ್ತ, ಪಕ್ಕದಲ್ಲೇ ಪಾತ್ರೆ ತೊಳೆಯುತ್ತಿದ್ದ ದೊಡ್ದಮ್ಮನ ಸ್ಟೀಲ್ ಪಾತ್ರೆಗಳ ಸದ್ದನ್ನು ಕೇಳಿಸಿಕೊಳ್ಳುತ್ತ,  ಎಲೆ ಅಡಿಕೆ ಹಾಕಿಕೊಳ್ಳುತ್ತ, ನಮ್ಮ ದೊಡ್ಡಪ್ಪನನ್ನು ಕೇಳಿದೆ, ಮೊದಲು ಮನೇಲೆ ಎತ್ತು ಇದ್ದವಲ್ಲ, ಈಗ ಏನ್ ಮಾಡಿದೆ? ನಮ್ಮ ದೊಡ್ಡಪ್ಪ, ಅವನ್ನು ಸಾಕಲು ಆಗದೆ ಮಾರಿ ಬಹಳ ವರುಷಗಳೇ ಕಳೆದಿವೆ ಅಂದರು. ಯಾಕ್ ದೊಡ್ಡಪ್ಪ ನೀನು ಇಷ್ಟಪಟ್ಟು ಬೆಳಿಸಿದವು ಅಲ್ವ ಅಂದೆ. ದೊಡ್ದಮ್ಮ ಪಕ್ಕದ ಮನೆಯ ಗೌರಕ್ಕನ ಹತ್ರ ಧಾರವಾಯಿಯಲ್ಲಿ ಬರುವ ಯಾವುದೋ ವಿಲ್ಲನ್ ಪಾತ್ರವನ್ನು ಯಗ್ಗ ಮಗ್ಗ ಬೈತಿದ್ರು. ದೊಡ್ಡಪ್ಪ, ಬೇಸಿಗೆಲಿ ಮೇವಿರಲ್ಲ, ಏನ್ ಮಾಡದು. ಈಗ ಟ್ರಾಕ್ಟ್‌ರ್ ಇರೋದಕ್ಕೆ ಎತ್ತು ಅಷ್ಟು ಬೇಕಾಗಲ್ಲ, ಬರೀ ಬಿತ್ತಕೆ, ಕುಂಟೆ ಹೋಡಿಯೋಕೆ ಬೇಕು ಅಷ್ಟೇ. ಅದಕ್ಕೆ ಆ ಶಂಕ್ರನವು ಇದ್ವು ಮೊದಲು, ಈಗ ಆ ಬೋಳಿಮಗನು ಮಾರಿದನೆ ಅಂದ್ರು. ದೊಡ್ಡಮ್ಮನ ಮಾತು ಮುಗಿದು ಗೌರಕ್ಕನ ಮಾತು ಶುರುವಾಗಿತ್ತು.

ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ಊರಿಗೆ ಹೋದರೆ ನಮ್ಮ ದೊಡ್ಡಪ್ಪ ಅವರ ಮನೆಯಲ್ಲಿದ್ದ ಎತ್ತುಗಳ ಬಗ್ಗೆ ಬಹಳ ಹೇಳುತ್ತಿದ್ದರು. ಈಗ ಇರುವ ಎತ್ತುಗಳು, ಮುಂಚೆ ಇದ್ದ ಎತ್ತುಗಳು, ಊರಿಗೆ ಹೆಮ್ಮೆ ತಂದ ಎತ್ತುಗಳು, ಕಲ್ಲಸಾದರಳ್ಳಿ ಸಂತೆಯಲ್ಲಿ ಬಹಳ ದುಡ್ಡಿಗೆ ಹೋದ ಎತ್ತುಗಳ ಬಗ್ಗೆ ಗಂಟೆಗಟ್ಟಲೇ ಹೇಳುತ್ತಿದ್ದರು. ಸುತ್ತ ಮುತ್ತಲ ಹಳ್ಳಿಗಳಲ್ಲಿ ಯಾರು ಕಟ್ಟಲಾಗದಂತಹ ಎತ್ತುಗಳನ್ನು ನನ್ನ ಕೊಟ್ಟಿಗೆಲಿ ಕಟ್ಟಬೇಕು ಎಂದು ಆಸೆಪಡುತ್ತಿದ್ದರು. ಬೆಳಗ್ಗೆ ಎದ್ದು ಕೊಟ್ಟಿಗೆಯಿಂದ ಆಚೆ ಕಂಬಕ್ಕೆ ಎತ್ತುಗಳನ್ನು ಕಟ್ಟಿದ್ದರೆ ಕೈಲಿ ಬೇವಿನ ಕಡ್ಡಿ ಹಿಡಿದು ಮತ್ತೊಂದು ಕೈಲಿ ಎತ್ತುಗಳ ಬೆನ್ನು ಸವರುವುದು, ಅವುಗಳ ಮೇಲಿರುತ್ತಿದ್ದ ಉಣ್ಣೆಗಳನ್ನು ಕಿತ್ತು, ಕಾಲಿನಲ್ಲಿ ತುಳಿದು ಸತ್ತಿದೆಯ ಎಂದು ಪರೀಕ್ಷಿಸುವುದು ಅವರ ಬೆಳಗಿನ ದಿನಚರಿ. ನಾವು ಹತ್ತಿರದಲ್ಲಿ ಕಂಡರೆ ಹಾಯುವುದಿಲ್ಲ ಬಾ ಎಂದು ಕರೆದು ಎತ್ತುಗಳ ಕತ್ತು ಸವರಲು ಹೇಳುತ್ತಿದ್ದರು. ನಮ್ಮ ದೊಡ್ಡಪ್ಪನ ಮನೆಯಲ್ಲಿ ಅಷ್ಟೇಯಲ್ಲ, ಪ್ರತಿಯೊಬ್ಬ ರೈತರು ನಮ್ಮ ದೊಡ್ಡಪ್ಪ ಮಾಡುತ್ತಿದ್ದುದ್ದನ್ನೇ ಮಾಡುತ್ತಿದ್ದರು. ಮನೆಗೆ ಕನಿಷ್ಠ ಪಕ್ಷ ಒಂದು ಜೊತೆ ಎತ್ತುಗಳಾದರು ಇದ್ದವು. ಪ್ರತಿಯೊಬ್ಬರ ಮನೆಯ ಹೊಸ್ತಲಿನ ಎದುರಿಗೆ ನಡುಮನೆಯಲ್ಲಿ ಮನೆಯ ಯಜಮಾನರು ಬಿಳಿ ಪಂಚೆ ಉಟ್ಟು ಅವರ ಎರಡು ಎತ್ತುಗಳ ಜೊತೆಗಿನ ಪಟ ರಾರಾಜಿಸುತ್ತಿತ್ತು.

ನಮ್ಮ ಮನೆಯಲ್ಲೂ ಎರಡು ಜೊತೆ ಎತ್ತುಗಳಿದ್ದವು. ಒಂದೊಂದು ಜೊತೆಗೂ ಒಬ್ಬ ಆಳು. ಅವರಿಬ್ಬರಲ್ಲೂ ಪೈಪೊಟಿ. ವಯಸ್ಸಾದ ನಿಂಗಣ್ಣ ವಯಸ್ಸಾದ ಕೆಂದೆತ್ತಿನ ಜೋಡಿಯನ್ನು ನೋಡಿ ಕೊಳ್ಳುತ್ತಿದ್ದರು. ಇವು ಬಹಳ ಸೌಮ್ಯ ಸ್ವಭಾವದವು. ಯಾರಿಗೂ ಅವುಗಳ ಕೊಂಬನ್ನು ತೋರಿಸದಂತಹವು. ಹಬ್ಬಗಳ್ಳಲ್ಲಿ ಎತ್ತಿನ ಪೂಜೆ ಮಾಡಲು ಈ ಜೋಡಿಯನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಜೋಡಿಗೆ ಮಾತ್ರ ನಾವೇ ಪೂಜೆಯ ನಂತರ ಎಡೆ ತಿನಿಸುತ್ತಿದ್ದೆವು. ನಿಂಗಣ್ಣ ಬರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸೋಮ, ನಮ್ಮ ಮನೆಯ ಬಿಳಿ ತರುಣ ಎತ್ತುಗಳನ್ನ ನೋಡಿಕೊಳ್ಳುತ್ತಿದ್ದ. ಇವುಗಳ ಬಳಿ ಹೋಗಲೂ ಬಿಡುತ್ತಿರಲಿಲ್ಲ. ಅವು ಅಷ್ಟು ಭಯ ಹುಟ್ಟಿಸುತ್ತಿದ್ದವು. ಅಷ್ಟೇ ಸುಂದರವಾಗಿದ್ದವು. ಪ್ರತಿ ಸೋಮವಾರ ಅವುಗಳ ಮೈ ತೊಳೆದಾಗ ಅವುಗಳನ್ನು ನೋಡುವುದೆ ಒಂದು ಖುಷಿ. ಅವುಗಳ ಮೈಕಟ್ಟು ಸೋಮನ ಮೈಕಟ್ಟಿನಂತೆ ದಷ್ಟ ಪುಷ್ಟವಾಗಿತ್ತು. ಇವುಗಳ  ಪೂಜೆ ಮತ್ತು ಎಡೆ ಸೋಮನ ಜವಬ್ದಾರಿ. ನಮ್ಮನ್ನು ಅವುಗಳ ಬಳಿಯೂ ಬಿಟ್ಟುಕೊಡುತ್ತಿರಲಿಲ್ಲ. ಈ ಜೋಡಿ ಕೇವಲ ಅವನ ಮಾತನ್ನಷ್ಟೆ ಕೇಳುತ್ತವೆ ಎಂದು ಬಹಳ ಹೆಮ್ಮೆ ಪಡುತ್ತಿದ್ದ ಸೋಮ. ಊರಿನವರೆಲ್ಲರ ಮುಂದೆ ಅವನ ಎತ್ತುಗಳ ಬಗ್ಗೆ ಕೊಚ್ಚಿ ಕೊಳ್ಳುತ್ತಿದ್ದ.  ಈ ಎರಡು ಜೋಡಿಗೂ ಹುರುಳಿ ನುಚ್ಚು ಕೊಡುವುದು, ಬಣವೆಯಿಂದ ಮೇವು ತಂದು ಕೊಟ್ಟಿಗೆಯಲ್ಲಿ ಇಡುವುದು, ಮಧ್ಯ ರಾತ್ರಿ ಎದ್ದು ಮೇವಾಕುವುದು,   ಬೆಳಗ್ಗೆ ಮತ್ತು ಸಂಜೆ ಉಳುಮೆ ಮಾಡುವುದು, ಸೋಮವಾರ ಕೆರೆಯಲ್ಲಿ ಅವುಗಳ ಮೈ ತೊಳೆಯುವುದು,  ಬಸವನ ಹಬ್ಬದಲ್ಲಿ ಸಿಂಗಾರ ಮಾಡಿ ಊರ ಹೊರಗಿನ ದೇವಸ್ಥಾನದ ಬಳಿ ಪೂಜೆಗೆ ಕರೆದುಕೊಂಡು ಹೋಗುವುದು  ಮತ್ತು ಪೂಜೆಯ ನಂತರ ಊರ ಬೀದಿಗಳಲ್ಲಿ ಅವುಗಳ ಹಿಂದೆ ಓಡುವುದು. ಎಲ್ಲವೂ ನಿಂಗಣ್ಣ ಮತ್ತು ಸೋಮರ ಕೆಲಸ. ಇಬ್ಬರೂ ಅಷ್ಟೇ ಅಚ್ಚುಕಟ್ಟಾಗಿ, ಪ್ರೀತಿಯಿಂದ ಅವುಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ನಮ್ಮ ಮನೆಯಲ್ಲಿ ಒಂದು ಜೊತೆ ಎತ್ತುಗಳೂ ಇಲ್ಲ. ಟ್ರಾಕ್ಟ್‌ರ್ ತಂದಾಗ ಒಂದೇ ಜೊತೆ ಸಾಕು ಎಂದು ನಿಂಗಣ್ಣ ನೋಡಿಕೊಳ್ಳುತ್ತಿದ್ದ ಕೆಂದೆತ್ತಿನ ಜೋಡಿ ಮಾರಿದರು. ಸೋಮ ಮದುವೆಯಾಗಿ ಮನೆ ಬಿಟ್ಟ ನಂತರ ಕ್ರಮೇಣ ಬಿಳಿ ಎತ್ತಿನ ಜೋಡಿಯನ್ನು ಮಾರಿದರು. 

ಒಂದು ಕಾಲದಲ್ಲಿ ಜೋಡಿ ಎತ್ತುಗಳು ಆ ಮನೆಯ ಅಂತಸ್ತನ್ನು ಪ್ರತಿಬಿಂಬಿಸುತ್ತಿದ್ದವು. ನನ್ನ ಕೊಟ್ಟಿಗೆಯಲ್ಲಿ ಅಂತ ಎತ್ತುಗಳಿವೆ, ಇಂತ ಎತ್ತುಗಳಿವೆ ಎಂದು ಅವುಗಳ ವರ್ಣನೆಯಲ್ಲಿ ಜನ ಮುಳುಗಿರುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅವುಗಳ ಮೈ ತೊಳೆಯದೆ ಇವರು ಬಚ್ಚಲಿಗೆ ಇಳಿಯುತ್ತಿರಲಿಲ್ಲ. ಅವುಗಳಿಗೆ ಹಬ್ಬದೂಟವಾದ ಮೇಲೆ ಮನೆಯವರಿಗೆ. ಕೆಲವೊಮ್ಮೆ ಮನೆಯ ಪಡಸಾಲೆಗೆ ಎತ್ತುಗಳನ್ನು ಕರೆದುಕೊಂಡು ಬಂದು ಪೂಜೆ ಮಾಡಿದ್ದು ಉಂಟು. ಈಗ ಬೈಕುಗಳು, ಕಾರುಗಳು, ಜೀಪುಗಳು ಮತ್ತು ಟ್ರಾಕ್ಟರ್‌ಗಳು ಜೋಡಿ ಎತ್ತಿನ ಜಾಗದಲ್ಲಿವೆ. ಪೇರ್ ಪ್ರೊಗ್ರಾಮಿಂಗ್ ಮೊದಲು ಶುರುಮಾಡಿದ್ದು ನಮ್ಮ ಮನೆಗಳಲ್ಲಿದ್ದ ಎತ್ತುಗಳು. ನಾವು ಅವುಗಳನ್ನು ಅನುಸರಿಸುತ್ತಿದ್ದೇವೆ ಅಷ್ಟೇ ಎಂದು ಅನಿಸತೊಡಗಿದೆ. 

Sunday, September 14, 2014

ವನಸಿರಿ

ಅಲ್ಲಿ ನೋಡು ಇಲ್ಲಿ ನೋಡು
ಹಕ್ಕಿಯ ಸಾಲು
ಆ ಮಳೆಯು ಭುವಿಗಿಳಿದು
ಮರ ಗಿಡಗಳ ಪಾಲು

ಕುಣಿಯುತಿವೆ ವನರಾಶಿ
ನೋಡಲೆಷ್ಟು ಚೆಂದ
ಅದರೊಳಗಣ ಬದುಕು
ಇನ್ನಷ್ಟು ಅಂದ

ವನ್ಯಜೀವಿ, ವನರಾಶಿ
ನಮಗೆ ಸಿಕ್ಕ ವರ,
ಅದು ಉಳಿಯಬೇಕಾದರೆ
ಬೇಳೆಸಬೇಕು ಮರ.